image

ಕುಂಬಳೆ ಸೀಮೆಯ ಪ್ರಥಮ ವಂದನೀಯ ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸ್ಥಳ ಪುರಾಣವನ್ನೊಳಗೊಂಡ ಕ್ಷೇತ್ರ ಪರಿಚಯವೇ ಈ ವೆಬ್‌ಸೈಟ್. ಶ್ರೀ ಕ್ಷೇತ್ರದ ಸಮಗ್ರ ಮಾಹಿತಿ, ಸಚಿತ್ರವಾಗಿ, ಅಂದವಾಗಿ ಮೂಡಿ ಬಂದು ಎಲ್ಲಾ ಭಕ್ತರ ಮನ, ಮನೆಗಳಲ್ಲಿ ಶ್ರೀದೇವರ ದಿವ್ಯಚರಿತ್ರೆಯು ನೆಲೆ ನಿಲ್ಲುವಂತಾಗಲು ಸಹಕಾರಿಯಾಗಲಿ. ಶ್ರೀ ಪರಮೇಶ್ವರ ಮೂಲಸ್ಥಾನವಾದ ಶ್ರೀ ಕೌಡಿಂಕಾನ ಯಾತ್ರೆ ಅದಷ್ಟು ಬೇಗನೆ ನಡೆಸುವುದಕ್ಕೆ ಈ ರೀತಿಯ ಪ್ರಚಾರ ಮಾಧ್ಯಮವು ಉಪಯುಕ್ತವಾಗಲಿ, ಪರಮ ಪಾವನ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಿ ಭಾವುಕ ಭಕ್ತರ ಅಭೀಷ್ಟೆಯನ್ನು ನೆರವೇರಿಸುತ್ತಾ ನಮ್ಮೆಲ್ಲರನ್ನು ಅನವರತ ರಕ್ಷಿಸಲಿ. ಭಕ್ತಿಯೆ ನಂಬಿಕೆಯ ಬದುಕಿಗೆ ಅಡಿಗಲ್ಲು. ಜಗತ್ತಿನ ಆಗುಹೋಗುಗಳನ್ನು ಯೋಜಿತ ರೀತಿಯಲ್ಲಿ ನಡೆಸುತ್ತಿರುವ ಜಗನ್ನಿಯಾಮಕನ ಶಕ್ತಿಯನ್ನು ಗುರುತಿಸಿದ ಮಾನವ ಅದನ್ನು ಬೇರೆ ಬೇರೆ ರೂಪಗಳಲ್ಲಿ ಕಂಡುಕೊಂಡು ಭಗವಂತನೆಂದು ತಲೆಬಾಗಿ ಭಕ್ತಿಯಿಂದ ಪೂಜಿಸತೊಡಗಿದ. ಹಾಲಿನಲ್ಲಿ ನಮಗೆ ಕಾಣದ ಬೆಣ್ಣೆ ವಾಸ್ತವದಲ್ಲಿ ಇರುವುದು ಅನುಭವವೇಧ್ಯವಾಗಿರುವಂತೆ, ಭಗವಂತನ ಇರವನ್ನು ಅನುಭವಿಗಳು ತಮ್ಮ ಹೆಪ್ಪುಕಟ್ಟಿದ ದಿವ್ಯಾನುಭವಗಳೆಂಬ ಸುಜ್ಜಾನದ ಕಡೆಗೋಲಿನಲ್ಲಿ ಮಂಥನ ಮಾಡಿ ಕ೦ಡುಕೊಂಡರು. ಇಂತಹ ಪರಮಾತ್ಮನನ್ನು ಆರಾಧನೆ ಮಾಡುವುದರ ಮೂಲಕ ತನ್ನೆಲ್ಲಾ ಶ್ರೇಯಸ್ಸು ಪ್ರೇಯಸ್ಸುಗಳನ್ನು ಭಗವಂತನ ಚರಣತಲಗಳಲ್ಲಿ ಸಮರ್ಪಿಸುವುದರ ಮೂಲಕವೂ ಬದುಕಿಗೊಂದು ಮಹತ್ತರ ಅರ್ಥವನ್ನೂ ಮನುಷ್ಯ ಜೀವನ ಋಜು ಮಾರ್ಗದಲ್ಲಿ ನಡೆಯುವುದಕ್ಕಿರುವ ಪ್ರೇರಣೆಯನ್ನೂ ಮಾನವ ಪಡೆದುಕೊಂಡ, ಹೀಗೆ ಭಗವಂತನ ವಿವಿಧ ರೀತಿಯ ಪೂಜೆಗಳಿಂದ ಬದುಕಿನಲ್ಲಿ ಧರ್ಮವನ್ನು ಆಚರಿಸಿ ಅರ್ಥ ಕಾಮಗಳನ್ನು ಪಡೆಯುವುದಲ್ಲದೆ ಇವುಗಳ ಫಲವಾಗಿ ಜೀವಿತದ ಅಂತಿಮ ಗುರಿಯಾದ ಮೋಕ್ಷವು ಸುಲಭವಾಗಿ ಲಭ್ಯವಾಗುವುದು ಎಂದು ನಮ್ಮ ಸನಾತನ ಧರ್ಮಸಾರವು ಹೇಳುತ್ತದೆ.

ದೇವಾಲಯಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವು ನಮ್ಮ ಮಾನ ಬಿಂದುಗಳಿವೆ. ದೇವಾಸ್ಥಾನಗಳಲ್ಲಿ ನಡೆಯುವ ಪೂಜೆ ಉತ್ಸಾವಾದಿಗಳಲ್ಲಿ ಸಹಭಾಗಿತ್ವ ಹೊಂದಿದಾಗ ಲಭಿಸುವ ಪುಣ್ಯದ ಜೊತೆ ಜೊತೆಗೆ, ಸನ್ಮಸ್ಸಿನ ಸಜ್ಜನರಿಗೆ ಯೋಗ್ಯ ಸಂಸ್ಕಾರಗಳನ್ನು ನೀಡುವ ಶ್ರದ್ದಾಭಕ್ತಿಯ ಕೇಂದ್ರಗಳಾಗಿವೆ. ಪುರಾಣಪ್ರಸಿದ್ಧವಾದ ಕುಂಬಳೆ ಸೀಮೆಯ ಇತಿಹಾಸದಲ್ಲಿ ಪರಮಪಾವನವಾದ ಆಡೂರು ಪ್ರಾಧಾನ್ಯವುಳ್ಳ ದೇಗುಲವಾಗಿದೆ. ಕುಂಬಳೆ ಸೀಮೆಯ ಆಡೂರು, ಮಧೂರು, ಕಾವು (ಮುಂಜಂಗಾವು), ಕಣಿಪುರ (ಕುಂಬಳೆ) ಎಂಬ ಪ್ರಸಿದ್ದ ನಾಲ್ಕು ದೇವಾಲಯಗಳು ಈ ಸೀಮೆಯ ಮಾತ್ರವಲ್ಲದೆ ಪರವೂರ ಭಕ್ತಬಾಂಧವರ ಶ್ರದ್ಧಾ ಭಕ್ತಿಯ ಅರಾಧನಾ ಕೇಂದ್ರಗಳಲ್ಲ್ದೆ ಸರ್ವಾಭಯಪ್ರದವಾದ ದೇವಸನ್ನಿಧಿಗಳಾಗಿವೆ.

ಪಾವನೆಯಾದ ಪಯಸ್ವಿನಿಯ ಝುಳು ಝುಳು ನಿನಾದಕ್ಕೆ ಮೈಮರತು ತಲಕಾವೇರಿಯ ಬ್ರಹ್ಮಗಿರಿಯಿಂದ ಚಾಚಿ ನಿಂತಿರುವ ಹಚ್ಚ ಹಸುರಿನ ಬೆಟ್ಟದ ಸಾಲುಗಳ ಪ್ರಕೃತಿ ಸೌಂದರ್ಯವನ್ನು ಮೈಗೂಡಿಸಿಕೊಂಡು ತಲ್ವಚ್ಚೇರಿಯ ಕಾನನ ಮಧ್ಯದಿಂದ ಉಮಗಮಗೊಂಡು ಹರಿಯುವ ಲಿಂಗಧಾರೆಯೆಂಬ ತೊರೆಯಿಂದ ಬಳಸಲ್ಪಟ್ಟು ಭತ್ತದ ಗದ್ದೆಗಳಿಂದಲೂ ತೆಂಗು ಕಂಗು ಕೃಷಿಯ ಮಧ್ಯೆ ಘನಗಾಂಭೀರ್ಯದಿಂದ ತಲೆಎತ್ತಿ ಶೋಭಿಸುತ್ತಿರುವ ಕ್ಷೇತ್ರವೇ ನಾಡಿನ ಕಲಶಪ್ರಾಯವಾದ ಅಡೂರು ಶ್ರೀಕ್ಷೇತ್ರ ದೇವಾಲಯದ ಮಳಲಿ ಲಿಂಗದಲ್ಲಿ ದಿವ್ಯಶಕ್ತಿಯಾಗಿ ನೆಲೆಯಾಗಿ ಶಾಂತ ರೂಪಿಯಾಗಿ ಹರಸುತ್ತಿರುವ ಆರಾಧ್ಯ ಮೂರ್ತಿಯೇ ಅಡೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ಎಂಬ ಅನನ್ಯ ಚೈತನ್ಯ.